ಭಾರತೀಯ ಪರಂಪರೆಯಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಗುರುಕುಲಕ್ಕೆ ಸೇರ್ಪಡೆಯಾಗುವ ಮಕ್ಕಳಿಗೆ ಶಾಸ್ತ್ರೋಕ್ತವಾಗಿ ದೀಕ್ಷೆಯನ್ನು ನೀಡಿ ವಿದ್ಯೆಯನ್ನು ಕಲಿಯಲು ಅವಕಾಶ ಮಾಡಿಕೊಡುವ ಪರಂಪರೆಯಿದೆ. ಇದರ ಅನ್ವಯ ಗುರುಕುಲದಲ್ಲಿ ದಿನಾಂಕ 14/6/2019 ರಂದು ಬೆಳಗ್ಗೆ ಬ್ರಹ್ಮಕೂರ್ಚ ಹವನದೊಂದಿಗೆ ದೀಕ್ಷಾ ಸಮಾರಂಭವು ಆರಂಭಗೊಂದಿತು.
ಗುರುಕುಲದ ಮಾರ್ಗದರ್ಶಕ ಮಂಡಳಿಯ ಸದಸ್ಯರು ಹಾಗೂ ವೇದ, ಸಂಸ್ಕೃತ ವಿದ್ವಾಂಸರೂ ಆದ ಶ್ರೀಯುತ ಟಿ ಎನ್. ಪ್ರಭಾಕರ ರವರು ಮಕ್ಕಳಿಗೆ ಮಂತ್ರದೀಕ್ಷೆಯನ್ನು ನೀಡಿದರು. ಕರ್ನಾಟಕದ 8 ಜಿಲ್ಲೆಗಳಿಂದ 18 ಮಕ್ಕಳು,ಅಧಿಶೀಲ ಶಿಕ್ಷಣಕ್ಕೂ, ಕರ್ನಾಟಕದ 3 ಜಿಲ್ಲೆಗಳಿಂದ 3 ಮಕ್ಕಳು, 3 ಹೊರರಾಜ್ಯಗಳಿಂದ ಬಂದ 3 ಮಕ್ಕಳು ಒಟ್ಟು 6 ಮಕ್ಕಳು ಅಧಿಪ್ರಜ್ಞ ಶಿಕ್ಷಣಕ್ಕೂ ಗುರುಕುಲದಲ್ಲಿ ಪ್ರವೇಶವನ್ನು ಪಡೆದಿದ್ದಾರೆ.
ಸಭಾ ಕಾರ್ಯಕ್ರಮವು ವೇದಮಂತ್ರದೊಂದಿಗೆ ಆರಂಭವಾಯಿತು ಕಾರ್ಯಕ್ರಮದ ಪ್ರಸ್ತಾವನೆಯನ್ನು ಮೂರೂ ಗುರುಕುಲಗಳ (ಮೈತ್ರೇಯೀ,ಪ್ರಬೋಧಿನಿ, ವೇದವಿಜ್ಞಾನ ಗುರುಕುಲ) ಸಹ ಸಂಯೋಜಕರಾದ ಶ್ರೀಯುತ ಪ್ರಸನ್ನಾಚಾರ್ಯರು ನಡೆಸಿಕೊಟ್ಟರು. ಉಪ್ಪಿನಂಗಡಿಯ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಶ್ರೀಯುತ ವಸಂತ ಕುಮಾರ್ ತಾಳ್ತಜೆಯವರು ತಾಯ್ನುಡಿಯ, ಸಂಸ್ಕೃತ ಭಾಷೆಯ, ಸಂಸ್ಕೃತಿಯ ಕುರಿತು ಮಾರ್ಗದರ್ಶನವನ್ನು ಮಾಡಿದರು. ವಿಟ್ಲದ ಆಯುರ್ವೇದ ವೈದ್ಯರಾದ ಶ್ರೀಯುತ ಜೆಡ್ಡು ಗಣಪತಿ ಭಟ್ ರವರು ನೂತನ ಛಾತ್ರೆಯರಿಗೆ ಪ್ರಥಮ ಪಾಠವನ್ನು ಬೋಧಿಸಿದರು. ಗುರುಕುಲಗಳ ಆರಂಭಕ್ಕೆ ಕಾರಣರಾದವರಲ್ಲಿ ಒಬ್ಬರಾದ ಶ್ರೀಯುತ ನೆ. ಸೀತಾರಾಮ ಕೆದಿಲಾಯರು, ಗುರುಕುಲದ ಮಾರ್ಗದರ್ಶಕ ಮಂಡಲಿಯ ಸದಸ್ಯರು ಅಜೇಯ ವಿಶ್ವಸ್ತ ಮಂಡಳಿಯ ವಿಶ್ವಸ್ತರಲ್ಲಿ ಒಬ್ಬರಾದ ಶ್ರೀಯುತ ಸುಬ್ರಹ್ಮಣ್ಯ ಭಟ್ ಕಜಂಪಾಡಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಕು. ಕೀರ್ತಿ, ಸ್ವಾಗತ ಪರಿಚಯವನ್ನು ಕು. ಪಲ್ಲವಿ, ಧನ್ಯವಾದ ಸಮರ್ಪಣೆಯನ್ನು ಕು. ಪ್ರಜ್ಞಾ ನಡೆಸಿಕೊಟ್ಟರು.
ಅಂತಾರಾಷ್ಟ್ರೀಯ ಯೋಗ ದಿನ
ವಿಶ್ವಕ್ಕೆ ಶಾಂತಿ, ಸೌಹಾರ್ದ, ಪ್ರೀತಿಯನ್ನು ಹಂಚುವ ದೃಷ್ಟಿಯನ್ನಿಟ್ಟುಕೊಂಡು ನಮ್ಮ ನೆಚ್ಚಿನ ಪ್ರಧಾನಿ ಮೋದಿಯವರಿಂದ ಆರಂಭಗೊಂಡ ವಿಶ್ವಯೋಗ ದಿನಕ್ಕೆ 5ನೇ ವರ್ಷದ ಸಂಭ್ರಮ ಈ ಶುಭದಿನದಂದು (21/6/2019) ಗುರುಕುಲದಲ್ಲಿ ನಡೆದ ಚಟುವಟಿಕೆಗಳು ಇಂತಿವೆ. ಮುಂಜಾನೆ ಗುರುಕುಲದ ಛಾತ್ರೆಯರು 24ಸೂರ್ಯನಮಸ್ಕಾರಗಳನ್ನು ಧ್ಯಾನ, ಪ್ರಾಣಾಯಾಮಗಳನ್ನು ಮಾಡಿದರು.
ಸಂಜೆ ವಿಟ್ಲದ ಉದ್ಯಮಿ ಹಾಗೂ ಅಜೇಯ ವಿಶ್ವಸ್ಥ ಮಂಡಳಿಯ ಸದಸ್ಯರೂ ಆದ ಶ್ರೀಯುತ ಸುಬ್ರಾಯ ಪೈ ರವರು ಧ್ಯಾನದ ಮಹತ್ವವನ್ನು ತಿಳಿಸಿ ಪ್ರಾಯೋಗಿಕವಾಗಿಯೂ ಧ್ಯಾನವನ್ನು ಅಭ್ಯಾಸ ಮಾಡಿಸಿದರು. ನಂತರ ಯೋಗದ ಮಹತ್ವವನ್ನು ಗುರುಕುಲದ ಮಾತೃಶ್ರೀ ಹಾಗೂ ‘ಯೋಗ’ ವಿಷಯದಲ್ಲಿ ಪದವಿಯನ್ನು ಪಡೆದ ಶ್ರೀಮತಿ ಗಾಯತ್ರಿಯವರು ತಿಳಿಸಿಕೊಟ್ಟರು. ಯೋಗದ ಕುರಿತು ಗೀತೆಯನ್ನು ಕು. ವನಜಾ ಹಾಡಿದಳು. ಕಾರ್ಯಕ್ರಮದ ನಿರ್ವಹಣೆಯನ್ನು ಕು. ತೇಜಸ್ವಿನಿ ನಡೆಸಿಕೊಟ್ಟಳು.
ಕೇವಲ ಗುರುಕುಲದಲ್ಲಿ ಮಾತ್ರವಲ್ಲದೆ ಕಾಡುಮಠದ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಯೋಗದಿನವನ್ನು ಗುರುಕುಲದ ವತಿಯಿಂದ ನಡೆಸಲಾಯಿತು. ಯೋಗದ ಮಹತ್ವವನ್ನು ತಿಳಿಸಿ, ಪ್ರಾಯೋಗಿಕವಾಗಿ ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನದ ಅಭ್ಯಾಸವನ್ನು ಗುರುಕುಲದ ಛಾತ್ರೆಯರು ನಡೆಸಿಕೊಟ್ಟರು, ಇದರ ಫಲವನ್ನು 85 ಮಕ್ಕಳು ಪಡೆದರು.
ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ವಿಶ್ವಯೋಗದಿನವನ್ನು ಆಚರಿಸಲಾಯಿತು. ಗುರುಕುಲದ ಛಾತ್ರೆಯರು ಯೋಗದ ಮಹತ್ವವನ್ನು ತಿಳಿಸಿ ಸೂರ್ಯನಮಸ್ಕಾರ, ಧ್ಯಾನ, ಪ್ರಾಣಾಯಾಮದ ಅಭ್ಯಾಸವನ್ನು ಶಾಲಾ ಮಕ್ಕಳಿಗೆ ಮಾಡಿಸಿದರು, ಶಾಲೆಯ 250 ಮಕ್ಕಳು ಇದರಲ್ಲಿ ಭಾಗವಹಿಸಿದ್ದರು.