ಸುಖೀ ಸಮಾಜ – ನನ್ನ ಕನಸು

Share:

ನಮ್ಮ ಸಮಾಜದಲ್ಲಿ ಸಮಸ್ಯೆಗಳು ತುಂಬಾ ಕಾಣುತ್ತಿವೆ. ಅದಕ್ಕೆ ಪರಿಹಾರಗಳೂ ಮಾಡಲಾಗುತ್ತಿವೆ. ಹೀಗಾದರೂ ಹೊಸಹೊಸ ಸಮಸ್ಯೆಗಳು ಹುಟ್ಟುತ್ತಿವೆಯೇ ಹೊರತು ಅವುಗಳು ಕಡಿಮೆಯಾಗುತ್ತಿಲ್ಲ. ಕಾರಣವೇನು….? ಎಂದು ಯೋಚಿಸಿದಾಗ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಮುಂದೆಯಲ್ಲ, ಹಿಂದೆ. ಸಮಸ್ಯೆಯ ಕಾರಣ ನಾಶವಾದಲ್ಲಿ ಸಮಸ್ಯೆಗಳು ನಿಶ್ಶೇಷವಾಗಿ ಕಳೆದು ಹೋಗುತ್ತವೆ ಎಂದು ತಿಳಿದು ಬಂದಿತು. ಈ ಚಿಂತನೆಯ ಆಧಾರದ ಮೇಲೆ ನನ್ನ ಮನದಲ್ಲಿ ಮೂಡಿಬಂದ ಅಪೇಕ್ಷೆಗಳನ್ನು ಅಕ್ಷರಗಳಾಗಿ ಇಳಿಸುವ ಪುಟ್ಟ ಯತ್ನವನ್ನು ಮಾಡುತಿದ್ದೇನೆ.

ಶಿಕ್ಷಣ ವ್ಯವಸ್ಥೆಯ ಪೂರ್ತಿ ಅಧಿಕಾರವನ್ನು ಜ್ಞಾನಿಗಳಿಗೆ, ಸಚ್ಚಾರಿತ್ರ್ಯವುಳ್ಳವರಿಗೆ ಸಭ್ಯರಾಗಿರುವ ಹಾಗೂ ಉತ್ತಮ ಜೀವನಾನುಭವವನ್ನು ಪಡೆದಿರುವವರಿಗೆ ಕೊಟ್ಟಲ್ಲಿ, ಮುಂದಿನ ಪ್ರಜೆಗಳನ್ನು ನಿರ್ಮಿಸುವ ಶಿಕ್ಷಕರು ಕೇವಲ ಪುಸ್ತಕದಲ್ಲಿರುವ ವಿಷಯಗಳನ್ನು ಮಕ್ಕಳ ಮೆದುಳಿಗೆ ತುಂಬಿಸುವವರಾಗಿರದೆ, ಉತ್ತಮ ವ್ಯಕ್ತಿತ್ವವನ್ನು ನಿರ್ಮಾಣ ಮುಡುವವರಾಗಿರುತ್ತಾರೆ. ರಾಷ್ಟ್ರದಲ್ಲಿರುವ ಎಲ್ಲರೂ ಉತ್ತಮ ವ್ಯಕ್ತಿತ್ವವನ್ನು ಪಡೆದಲ್ಲಿ ನಮ್ಮ ಮುಂದಿರುವ 80% ಸಮಸ್ಯೆಗಳು ಕಳೆದುಹೋಗುತ್ತವೆ.

  • ಸಾಮರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ಹಾಗೂ ಉದ್ಯೊಗದ ವ್ಯವಸ್ಥೆ ಇದ್ದಲ್ಲಿಯಾರಿಗೂ ಮೀಸಲಾತಿಯ ಅವಶ್ಯಕತೆ ಇರುವುದಿಲ್ಲ. ಎಲ್ಲರೂ ಪರಿಶ್ರಮದ ಮೂಲಕವೇ ಸುಖವನ್ನು ಪಡೆಯುವವರಾದರೆ ಭ್ರಷ್ಟತೆ ಇತ್ಯಾದಿ ಸಾಮಾಜಿಕ ಪಿಡುಗುಗಳು ಪೂರ್ತಿಯಾಗಿ ಕಳೆದು ಹೊಗುತ್ತವೆ. ಆದ್ದರಿಂದ ಎಲ್ಲರೂ ಶ್ರಮಿಗಳಾಗುವುದು ಅನಿವಾರ್ಯ.
  • ನಮ್ಮದೇ ದೇಶದ ಸರಕಾರದ ಧನಸಹಾಯದಿಂದ ಓದಿದ ನಂತರ, ಹೆಚ್ಚಿನ ಸಂಭಾವನೆಗಾಗಿ ತಮ್ಮ ಪ್ರತಿಭೆಯನ್ನು ಹಾಗೂ ಶ್ರಮವನ್ನು ಹೊರದೇಶಗಳಿಗೆ ಕೊಡುತ್ತಿರುವವರನ್ನು ಪುನಃ ತಾಯ್ನಾಡಿಗೆ ಕರೆಸುವ ಪ್ರಯತ್ನ ಮಾಡಬೇಕು ಹಾಗೂ ಇನ್ನು ಮುಂದೆ ಈ ದೇಶದಲ್ಲಿ ಓದಿದವರೆಲ್ಲರೂ ಈ ದೇಶದ ಅಭಿವೃದ್ಧಿಗಾಗಿಯೇ ದುಡಿಯುವಂತೆ ಮಾಡಿದರೆ ನಮ್ಮ ದೇಶ ಅಭಿವೃದ್ಧಿಯ ಉತ್ಕೃಷ್ಟಸ್ಥಿತಿಯನ್ನು ತಲಪುವುದು ನಿಶ್ಚಿತ.
  • ಪ್ರತಿಯೊಬ್ಬ ವ್ಯಕ್ತಿಯೂ ಅನಾವಶ್ಯಕ ತಾಂತ್ರಿಕತೆಯನ್ನು ಬಳಸದೆ ಪ್ರಕೃತಿಗೆ ಹತ್ತಿರವಾದ, ಸರಳವಾದ ಜೀವನವನ್ನು ನಡೆಸಿದರೆ ತನಗೂ, ಇತರರಿಗೂ ಹಾಗೂ ರಾಷ್ಟ್ರಕ್ಕೂ ಹಿತವಾಗುವುದು.
  • ಹೆಚ್ಚಾಗಿ ತಾಂತ್ರಿಕತೆಯ ಅಭಿವೃದ್ಧಿಗೆ ಸಿಗುತ್ತಿರುವ ಸೌಲಭ್ಯಗಳು ಹಾಗೂ ಪೆÇ್ರೀತ್ಸಾಹ ಜೀವನಾಧಾರವಾಗಿರುವ ಕೃಷಿಗೆ ಸಿಗಬೇಕು. ಕೃಷಿಯು ವಾಣಿಜ್ಯವಾಗಿರಬಾರದು.
  • ಸಮಾಜದಲ್ಲಿ ಎಲ್ಲರೂ ಕೇವಲ ಸ್ವಾರ್ಥಕ್ಕಾಗಿ ಶ್ರಮ ಪಡುತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ಸ್ವಾರ್ಥಿಯಾಗದೆ ಉದಾರನಾಗಿ ಆದರ್ಶ ಪ್ರಾಯನಾದಲ್ಲಿ ಸಮಸ್ಯೆಗಳು ಗುರುತೂ ಸಿಗದಂತೆ ಮಾಯವಾಗುವವು.

ಮೇಲೆ ಹೇಳಿರುವ ಈ ಅಂಶಗಳು ಈ ಸಮಾಜವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಲು ಸಮರ್ಥವಾದವು ಎಂದು ಭಾವಿಸಿ ಅವುಗಳನ್ನು ನಿಮ್ಮ ಮುಂದೆ ಹರವಿದ್ದೇನೆ. ನಾವು ನೀವೆಲ್ಲರೂ ಇದರ ಬಗ್ಗೆ ಚಿಂತಿಸಿ ವಿಮರ್ಶಿಸಿ ಸಮಸ್ಯೆಗಳಿಂದ ಮುಕ್ತರಾಗೋಣ.

ಶ್ರುತಕೀರ್ತಿ ಪ್ರಭು
ಮೈತ್ರೇಯೀ ಗುರುಕುಲಮ್