ಅರ್ಧಮಂಡಲೋತ್ಸವ ಸಮಾರೋಪ ಸಮಾರಂಭ – 2019

Share:
Date: February 17, 2019
Past Events

ಮೈತ್ರೇಯೀ ಗುರುಕುಲವು ತನ್ನ 24 ವರ್ಷಗಳ ಯಾತ್ರೆಯನ್ನು ಮುಗಿಸಿ 25 ನೇ ವರ್ಷಕ್ಕೆ ಹೆಜ್ಜೆಯಿರಿಸಿದೆ. ಆ ನಿಟ್ಟಿನಲ್ಲಿ ಗುರುಕುಲದಲ್ಲಿಯೂ ಒಂದು ಸಂವತ್ಸರದ ಕಾಲ ಅರ್ಧಮಂಡಲೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು ಎಂಬುದು ನಿಮಗೆ ತಿಳಿದೇ ಇದೆ. ಇದರ ಉದ್ಘಾಟನೆ 27.03.2018 (ಚೈತ್ರ.ಶುಕ್ಲ.ಏಕಾದಶಿ)ರಂದು ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿ, ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥಸ್ವಾಮಿಯವರ ದಿವ್ಯ ಸನ್ನಿಧಿಯಲ್ಲಿ, ಪರಮಪೂಜನೀಯ ಸರಸಂಘಚಾಲಕರಾದಂತಹ ಶ್ರೀ ಮೋಹನ್ ಜಿ ಭಾಗವತ್ ಹಾಗೂ ಅನ್ನಪೂರ್ಣಾ ಅಗಡಿಯವರ ಉಪಸ್ಥಿತಿಯಲ್ಲಿ ನೆರವೇರಿತು. ಅರ್ಧಮಂಡಲೋತ್ಸವದ ಪ್ರಯುಕ್ತ ವರ್ಷವಿಡೀ ಸಮಾಜಕ್ಕೆ ಗುರುಕುಲವನ್ನು ಪರಿಚಯಿಸುವ ಹಾಗೂ ಸಮಾಜದ ಎಲ್ಲಾ ವರ್ಗದ ಜನರನ್ನೂ ಗುರುಕುಲದೊಂದಿಗೆ ಜೋಡಿಸುವ ಸಲುವಾಗಿ ಮಾತೃಸಮಾವೇಶ, ಕೃಷಿಕರ ಸಮಾವೇಶ, ಗುರುಕುಲದ ಹೊರಗೆ ‘ಗುರುಕುಲದರ್ಶನಂ’ ನೃತ್ಯರೂಪಕ ಪ್ರದರ್ಶನದಂತಹ ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಈ ಅರ್ಧಮಂಡಲೋತ್ಸವದ ಸಮಾರೋಪ ಸಮಾರಂಭ 17.02.2019 (ಮಾಘ.ಶುದ್ಧ.ತ್ರಯೋದಶಿ) ರಂದು ಶ್ರೀ ವಿನಯ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು. ಕಾರ್ಯಕ್ರಮವು ಕಳೆದವಾರ ಹುತಾತ್ಮರಾದಂತಹ ವೀರಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವುದರ ಮೂಲಕ ಆರಂಭಗೊಂಡಿತು. ತದನಂತರ ವಿದ್ಯಾರ್ಥಿನಿಯರು ‘ಕೃಣ್ವಂತೋ ವಿಶ್ವಮಾರ್ಯಮ್’ ಎಂಬ ರೂಪಕವನ್ನು ಪ್ರಸ್ತುತಪಡಿಸಿದರು. ಈ ರೂಪಕವು ಮೈತ್ರೇಯಿಯ ಆತ್ಮಕಥನ ಹಾಗೂ ಗುರುಕುಲಶಿಕ್ಷಣಸೂತ್ರಗಳಾದಂತಹ ಮಕ್ಕಳ ಸಾಮರ್ಥ್ಯಕ್ಕೆ, ಆಸಕ್ತಿಗೆ ಅನುಸರಿಸಿ ಶಿಕ್ಷಣವಿರಬೇಕು, ಶಿಕ್ಷಣ ಕಾಲ-ದೇಶ-ಪಠ್ಯಪುಸ್ತಕನಿರಪೇಕ್ಷವಾಗಿರಬೇಕು, ಗುರುಶಿಷ್ಯರಲ್ಲಿ ಮುಕ್ತಸಂವಾದವಿರಬೇಕು, ಕಲಿಯುವುದು ಹೇಗೆಂದು ಕಲಿಯಬೇಕು, ಶಿಕ್ಷಣದಿಂದ ಮಗುವಿನ ಸರ್ವತೋಮುಖ ಬೆಳವಣಿಗೆಯಾಗಬೇಕು, ಶಿಕ್ಷಣದಿಂದ ಸ್ವಸ್ಥವ್ಯಕ್ತಿ ರೂಪುಗೊಳ್ಳಬೇಕು ಎಂಬುದನ್ನು ಬಿಂಬಿಸುವ ದೃಶ್ಯಗಳಿಂದ ಕೂಡಿತ್ತು

ವಿದ್ಯಾರ್ಥಿನಿಯರ ವೇದಘೋಷದ ಮೂಲಕ ಆರಂಭಗೊಂಡ ಸಭಾಕಾರ್ಯಕ್ರಮದಲ್ಲಿ ವಿವೇಕಾನಂದ ಯೋಗ ವಿಶ್ವವಿದ್ಯಾನಿಲಯ, ಬೆಂಗಳೂರು ಇದರ ವಿಶ್ರಾಂತ ಕುಲಪತಿಗಳು, ಮೂರೂ ಗುರುಕುಲಗಳ ಸಂಯೋಜಕರೂ ಆದಂತಹ ಡಾ|| ರಾಮಚಂದ್ರ ಭಟ್ ಕೋಟೆಮನೆ ಇವರು ಭಾರತೀಯವಾಙ್ಮಯದಲ್ಲಿ ಒಂದಾದಂತಹ ಬೃಹದಾರಣ್ಯಕದಲ್ಲಿ ಇತಿಹಾಸವಾಗಿ ದಾಖಲೆಗೊಂಡ ಮೈತ್ರೇಯೀ ಯಾಜ್ಞವಲ್ಕ್ಯರ ಸಂವಾದವನ್ನು ನೆನಪಿಸುತ್ತಾ ‘ಋಷಿಕುಲದ ಮಹಾಜ್ಞಾನಿಗಳ ಸಾಕ್ಷಾತ್ಕಾರವೇ ಉಪನಿಷತ್ತು, ಇಂತಹ ವೇದಶಾಸ್ತ್ರಗಳ ಅಧ್ಯಯನ ಮತ್ತು ಅನುಷ್ಠಾನದ ಕಡೆಗೆ ನಾವು ಪ್ರಯತ್ನಶೀಲರಾಗಬೇಕು’ ಎಂದು ಪ್ರಸ್ತಾವನೆ ನುಡಿದರು.

ಈ ಸಂದರ್ಭದಲ್ಲಿ 2 ಪುಸ್ತಕಗಳು ಲೋಕಾರ್ಪಣೆಗೊಂಡವು. ಅವುಗಳ ಪೈಕಿ ಒಂದು ಶಿಕ್ಷಾಪೀಯೂಷಾ. ಸಂಪಾದಕರಾದಂತಹ ಶ್ರೀ ಹಿರಣ್ಯವೆಂಕಟೇಶರು ಶಿಕ್ಷಣದ ಕುರಿತಾದ ಎಲ್ಲಾ ಸಂಗತಿಗಳನ್ನು ಸಂಗ್ರಹಿಸಲು ಮಾಡಿದ ಸಣ್ಣ ಪ್ರಯತ್ನವೆಂದು ಈ ಪುಸ್ತಕವನ್ನು ಪರಿಚಯಿಸಿದರು. ಅರ್ಧಮಂಡಲೋತ್ಸವದ ಉಪಾಧ್ಯಕ್ಷರಲ್ಲೊಬ್ಬರಾದಂತಹ ಶ್ರೀ ಎಸ್. ಪಿ ಚಿದಾನಂದರು ಪುಷ್ಪರಾಶಿಯಲ್ಲಿದ್ದ ಪುಸ್ತಕವನ್ನು ಮೇಲೆತ್ತುವ ಮೂಲಕ ಅನಾವರಣಗೊಳಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ‘ತಂದೆ-ತಾಯಿಯರು ಮಕ್ಕಳ ಕುರಿತಾಗಿ ಕಂಡ ಕನಸು ಗುರುಕುಲಶಿಕ್ಷಣದಿಂದ ನನಸಾಗುವುದರಲ್ಲಿ ಸಂಶಯವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುರುಕುಲದ ಸ್ಮರಣಸಂಚಿಕೆಯಾದಂತಹ ಅನುಸ್ಮೃತಿಯನ್ನು ಬೆಂಗಳೂರಿನ ಅಡಿಗ ಗ್ರೂಪ್ಸ್ ಆಫ್ ಹೋಟೆಲ್‍ನ ಮಾಲಕಿಯಾದ ಶ್ರೀಮತಿ ವಿನೊದಾ ವಾಸುದೇವ ಅಡಿಗರವರು ಲೋಕಾರ್ಪಣೆ ಮಾಡಿದರು. ಗುರುಕುಲದ ಪ್ರಸ್ತುತ ವಿದ್ಯಾರ್ಥಿನಿಯರ, ಪೂರ್ವಛಾತ್ರೆಯರ, ಪಾಲಕರ ಲೇಖನ, ಕಥೆ, ಕವನ, ಅನುಭವ ಮುಂತಾದವುಗಳಿಂದ ಈ ಅನುಸ್ಮೃತಿ ಕೂಡಿದೆ. ಸಂಪಾದಕಿಯಾದಂತಹ ಶ್ರೀಮತಿ ಆಶಾ ಬೆಳ್ಳಾರೆಯವರು ಇದರ ಪರಿಚಯವನ್ನು ಮಾಡಿಕೊಟ್ಟರು. ಆ ಬಳಿಕ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಶ್ರೀಮತಿ ವಿನೋದಾ ವಾಸುದೇವ ಅಡಿಗ ಇವರು ಮಾತನಾಡುತ್ತಾ ‘ನಾವು ನಮ್ಮ ದೇಶದ ಹಿತಕ್ಕೆ ನಮ್ಮಿಂದಾದದ್ದನ್ನು ಮಾಡಬೇಕು’ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾದ ಶ್ರೀ ಎನ್. ಕುಮಾರ್ ರವರು ಉಪಸ್ಥಿತರಿದ್ದು, ‘ಚಿಕ್ಕ ವಯಸ್ಸಿನಲ್ಲಿಯೇ ಸಂಸ್ಕೃತವನ್ನು ಕಲಿಯಬೇಕು. ಇಂದು ಪ್ರಪಂಚವೇ ಸಂಸ್ಕೃತವನ್ನು ಗೌರವಿಸುತ್ತಿದೆ. ನಮ್ಮ ಸಂಸ್ಕೃತಿಯನ್ನು ತಿಳಿಸುವ ವೇದ, ರಾಮಾಯಣಾದಿ ಎಲ್ಲಾ ಗ್ರಂಥಗಳು ಸಂಸ್ಕೃತದಲ್ಲಿಯೇ ಇವೆ. ಆದ್ದರಿಂದ ಸಂಸ್ಕೃತಿಯನ್ನು ಕಲಿಯಲು ಸಂಸ್ಕೃತವನ್ನು ತಿಳಿಯಬೇಕು. ಆಗ ಸಂಸ್ಕೃತಿಯ ಪುನರುತ್ಥಾನ ಸಾಧ್ಯ. ಈ ಗುರುಕುಲವು ಅಂತಹ ಕೆಲಸದಲ್ಲಿ ತೊಡಗಿದೆ. ಹೆಣ್ಣು ಮಕ್ಕಳಿಗೆ ಇಂತಹ ಗುರುಕುಲಗಳು ಹೆಚ್ಚಾಗಬೇಕು’ ಎಂದು ಅಭಿಪ್ರಯಿಸಿದರು.

ಪ್ರಬೋಧಕರಾಗಿ ಆಗಮಿಸಿದಂತಹ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮುಕುಂದರು ‘ವ್ಯಕ್ತಿಗೆ ಉತ್ತಮ ಪರಿಸರ, ಉತ್ತಮ ಕುಟುಂಬ ಮತ್ತು ಶಿಕ್ಷಣ ಸಿಕ್ಕಾಗ ವ್ಯಕ್ತಿಯು ಬೆಳೆಯುತ್ತಾನೆ. ಈ ಮೂರಕ್ಕೂ ಸಂಬಂಧವನ್ನು ಕಲ್ಪಿಸುವ ಪ್ರಯತ್ನವನ್ನು ಗುರುಕುಲದ ಮೂಲಕ ಸಂಘ ಮಾಡುತ್ತಾ ಇದೆ. ಸಂಘದ ಜೊತೆ ಕುಟುಂಬಗಳು ಮತ್ತು ಸಮಾಜ ಕೈಜೋಡಿಸಬೇಕು. ಪ್ರಯೋಗಸಿದ್ಧವಾದ ಗುರುಕುಲಶಿಕ್ಷಣ ಪದ್ಧತಿಯನ್ನು ಎಲ್ಲೆಡೆ ಹರಡಬೇಕು. ಗ್ರಾಮ ಗ್ರಾಮಗಳಲ್ಲಿ ಗುರುಕುಲಗಳಾಗಬೇಕು. ಈ ಶಿಕ್ಷಣ ಸಮಾಜದ ಎಲ್ಲರಿಗೂ ಸಿಗಬೇಕು’ ಎಂದು ತಿಳಿಸಿದರು.

ಕೊನೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರೂ ಅರ್ಧಮಂಡಲೋತ್ಸವ ಸ್ವಾಗತಸಮಿತಿಯ ಅಧ್ಯಕ್ಷರೂ ಆದ ಶ್ರೀ ವಿನಯ ಹೆಗ್ಡೆಯವರು ಅಧ್ಯಕ್ಷ ನುಡಿಯನ್ನು ನುಡಿದರು. ‘ಕುಟುಂಬ ವ್ಯವಸ್ಥೆ ಚೆನ್ನಾಗಿರುವುದು ನಮ್ಮ ದೇಶದಲ್ಲಿ. ಇದು ಮುಂದುವರಿಯಬೇಕಾದರೆ ಹೆಣ್ಣುಮಕ್ಕಳಿಗೆ ಕುಟುಂಬದ ಪರಿಕಲ್ಪನೆಯನ್ನು ಕೊಡಬೇಕು. ತಾಯಿಯಿಂದ ಉತ್ತಮ ಶಿಕ್ಷಣ ಸಿಕ್ಕರೆ, ಅಂತಹ ಮಕ್ಕಳಿಂದ ದೇಶವೇ ಬದಲಾಗುತ್ತದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗುರುಕುಲದ ಏಳ್ಗೆಗಾಗಿ ಶ್ರಮಿಸುತ್ತಿರುವಂತಹ ಗುರುಕುಲದ ಬಂಧುಗಳೇ ಆದ ಶ್ರೀ ಕೃಷ್ಣ(ಮೂರುಕಜೆ) ಮತ್ತು ಶ್ರೀ ಜನಾರ್ದನ(ವಿಟ್ಲ) ಇವರಿಗೆ ಗೌರವ ಪೂರ್ವಕವಾದಂತಹ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ವೈದಿಕರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮವು ಕೊನೆಗೊಂಡಿತು.

ಇದೇ ಸಂದರ್ಭದಲ್ಲಿ ಗುರುಕುಲದ ತೋಟದಲ್ಲಿ ಗುರುಕುಲದ ಚಿಂತನೆ, ಶಿಕ್ಷಣಕ್ರಮವನ್ನು ಪರಿಚಯಿಸುವ ಪ್ರದರ್ಶಿನಿಯನ್ನು ಆಯೋಜಿಸಲಾಗಿತ್ತು. ಅದರೊಂದಿಗೆ ಷೋಡಶ ಸಂಸ್ಕಾರಗಳು, ಆಶ್ರಮ ಮತ್ತು ವರ್ಣ ವ್ಯವಸ್ಥೆಯನ್ನು ಪರಿಚಯಿಸುವ ಸ್ವಸ್ಥಗ್ರಾಮದ ಮಾದರಿಯನ್ನೂ ನಿರ್ಮಿಸಲಾಗಿತ್ತು.